ರಸ್ತೆ ಸದ್ಬಳಕೆ ಹಾಗು ಪಾದಚಾರಿ ಮಾರ್ಗ

ರಸ್ತೆಗಳ ಸಂಪೂರ್ಣ ಬಳಕೆಯಾಗಬೇಕೆಂದರೆ  ಅತಿ  ಹೆಚ್ಚು ಜನರು ಸಾರ್ವಜನಿಕ ಸಾರಿಗೆಯನ್ನ ಬಳಸಬೇಕು, ಹಾಗು ಇದರ ಸಲುವಾಗಿ ಸಾರ್ವಜನಿಕ ಸಾರಿಗೆಯ ಸಾಮರ್ತ್ಯವನ್ನೂ  ಬಲಿಷ್ಟಗೊಳಿಸಬೇಕು – ಕಾರ್ತಿಕ್ ಶಶಿಧರ್ 

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಮಯ್ಯನವರು ಬೆಂಗಳೂರಿನಲ್ಲಿ ಟೆಂಡರ್ ಶೂರ್  ಪ್ರಯುಕ್ತ ನಿರ್ಮಾಣಮಾಡಿರುವ ಪಾದಚಾರಿ ಮಾರ್ಗಗಳು ರಸ್ತೆಗಿಂತಲೂ ಅಗಲವಾಗಿದೆ ಎಂದು ಟೀಕಿಸಿದರು. ಹೀಗೆ ಹೇಳಿ ಅವರು ಜನಾಭಿಪ್ರಾಯವನ್ನೇ ವ್ಯಕ್ತಪಡಿಸಿದರು, ಆದರೆ ತಂತ್ರಜ್ಞಾನದ ಮಾನದಂಡದಿಂದ ನೋಡಿದರೆ, ಈ ಅಭಿಪ್ರಾಯದಲ್ಲಿ ಬಹಳಷ್ಟು ದೋಷಗಳಿವೆ.

ಯಾವುದೇ ಊರಿನ ನಕ್ಷೆಯನ್ನು ನೋಡಿದರೆ, ಒಂದು ಕಡೆಯಿಂದ ಮತ್ತೊಂದೆಡೆಗೆ ಹೋಗಬೇಕಾದರೆ ಸತತವಾಗಿ ರಸ್ತೆಗಳು ಹಾಗು intersections (‘ಸರ್ಕಲ್’) ಗಳನ್ನ ದಾಟಿ ಹೋಗಬೇಕು. ಹೀಗಿರುವಾಗ ವಾಹನ ದಟ್ಟಣೆ ರಸ್ತೆಯಲ್ಲಾದರೂ ಆಗಬಹುದು ಸರ್ಕಲ್ ಅಥವ ಸಿಗ್ನಲ್ ನಲ್ಲಿಯೂ ಆಗಬಹುದು. ಸಮಸ್ಯೆಯನ್ನು ಸ್ಥಳೀಯವಾಗಿ ಬಗೆಹರಿಸಿದರೆ, ವಾಹನ ತಡೆ ಒಂದು ಕಡೆಯಿಂದ ಮತ್ತೊಂದೆಡೆ ತಳ್ಳಿದಂತಾಗುತ್ತದೆಯಷ್ಟೇ.  ಉದಾಹರಣೆಗೆ: ಮಲ್ಲೇಶ್ವರಂನ ಸರ್ಕಲ್ ಬಳಿ ಕೆಳರಸ್ತೆಯನ್ನು ಕಟ್ಟಿದ್ದರಿಂದ, ಅಲಿ ವಾಹನಸಂಚಲನೆ ಸುಗಮವಾಗಿದೆ, ಆದರೆ  ಸಂಪಿಗೆ ರಸ್ತೆ – ೮ನೇ ಕ್ರಾಸ್ ಸೇರುವ ಬಳಿ ಹಾಗು ಎಂಕೆಕೆ ರಸ್ತೆ ಮತ್ತು ಲಿಂಕ್ ರಸ್ತೆ ಸೇರುವ ಬಳಿ ವಾಹನ ತಡೆಗಳನ್ನ ಇಂದಿಗೂ ಕಾಣಬಹುದು.

OLYMPUS DIGITAL CAMERA

Image courtesy: Greg Younger

ಬೆಂಗಳೂರಿನ ವಾಹನ ಓಡಾಟದ ಪರಿಯನ್ನು ನೋಡಿದರೆ ವಾಹನ ದಟ್ಟಣೆ ರಸ್ತೆಗಳಿಗಿಂತ, ರಸ್ತೆಗಳು ಸೇರುವ ಬಳಿ (“intersections”) ಹೆಚ್ಚಾಗಿರುತ್ತದೆ. ಹೀಗಿರುವಾಗ ರಸ್ತೆಗಳನ್ನ ಎಷ್ಟೇ ವಿಸ್ತಾರಗೊಳಿಸಿದರೂ, “intersections”ಗಳಲ್ಲಿ ವಾಹನಗಳ ನಿಬಿಡತೆ ಹೆಚ್ಚಾಗುತ್ತದೆ. ಪಾದಚಾರಿ ಮಾರ್ಗಗಳು ಅಗಲವಾದರೆ  ರಸ್ತೆಗಳ ಅಳತೆ ಕಡಿಮೆಯಾಗುವುದೇನೋ ನಿಜ ಆದರೆ ಕೇವಲ ಇದರಿಂದ  ವಾಹನ ತಡೆ ಹೆಚ್ಚಾಗುತ್ತದೆ  ಎಂದು ತಿರ್ಮಾನಕ್ಕೆ ಬರುವುದು ಉಚಿತವಲ್ಲ .

ಕೇವಲ ಮೇಲುಸೇತುವೆ(flyover) ಅಥವಾ ಕೆಳರಸ್ತೆ(underpass)ಗಳನ್ನ ಕಟ್ಟಿ ಈ ಸಮಸ್ಯೆಗೆ ಪರಿಹಾರ ಕಾಣಬಹುದೆಂದು  ತಿರ್ಮಾನಕ್ಕೆ ಬರುವುದು ಸಹಜ, ಆದರೆ ಇದು ಪೂರ್ಣ ಪರಿಹಾರವಲ್ಲ.  ಮೇಲುಸೇತುವೆ/ಕೆಳರಸ್ತೆಗಳಿದ್ದಲ್ಲಿ ವಾಹನ ಸಂಚಾರ ಸುಗಮವಾಗಿದ್ದರೂ, ಮುಂಚೆಯೇ ಹೇಳಿದಂತೆ ಇದು ಕೇವಲ ವಾಹನ ತಡೆಯನ್ನು ಬೇರೆಯ ಕಡೆ ವರ್ಗಾಯಿಸುತ್ತದೆ.  ಇದಕ್ಕೆ ಉತ್ತಮವಾದ ಉದಾಹರಣೆಯೆಂದರೆ ಮಾರ್ಥಹಳ್ಳಿ ಸೇತುವಯ ಅಗಲೀಕರಣ: ಇದರಿಂದ ಸೇತುವೆಯಮೇಲೆ ಸಂಚಾರ ಸುಗಮವಾಯಿತು ಆದರೆ  ಮಾರ್ಥಹಳ್ಳಿ-ಔಟರ್ ರಿಂಗ್ ರಸ್ತೆ ಸೇರುವೆಡೆ ವಾಹನ ದಟ್ಟಣೆ ಹೆಚ್ಚಾಗಿದೆ, ಜೊತೆಗೆ ಆ ಮುಂಚಿನ ರಸ್ತೆಯಲ್ಲಿ ಓಡಾಟದ ವಿನ್ಯಾಸವೇ ಬದಲಾಗಿದೆ(ಉದಾ: ಬಲಕ್ಕೆ ತಿರುಗುವುದು ಈಗ ನಿಷೇಧ)

ಇಂತಹ ಗೊಂದಲವನ್ನು ಸರಿಪಡಿಸುವುದಾದರೂ  ಹೇಗೆ?

ಪ್ರಥಮವಾಗಿ, ಕೇವಲ ಒಂದು ಅಥವಾ ಎರಡು ರಸ್ತೆಯನ್ನು ನೋಡಿ ವ್ಯವಸ್ತೆಗಳನ್ನ ಕಲ್ಪಿಸಬಾರದು, ಸಮಗ್ರ ರಸ್ತೆಯ ಜಾಲವನ್ನು(network) ನೋಡಿ, ಯೋಜನೆಗಳಿಗೆ ನಾಂದಿ ಹಾಡಬೇಕು. ರಸ್ತೆಗಳ ಸಂಪೂರ್ಣ ಬಳಕೆಯಾಗಬೇಕೆಂದರೆ  ಅತಿ  ಹೆಚ್ಚು ಜನರು ಸಾರ್ವಜನಿಕ ಸಾರಿಗೆಯನ್ನ ಬಳಸಬೇಕು, ಹಾಗು ಇದರ ಸಲುವಾಗಿ ಸಾರ್ವಜನಿಕ ಸಾರಿಗೆಯ ಸಾಮರ್ತ್ಯವನ್ನೂ  ಬಲಿಷ್ಟಗೊಳಿಸಬೇಕು.  ಸಾರ್ವಜನಿಕ ಸಾರಿಗೆಯ ಕುಂದೆಂದರೆ, ಮನೆಯಿಂದ ನಿಲ್ದಾಣನದವರೆಗಿನ ದೂರ ಹಾಗು ಅಲ್ಲಿಗೆ ಹೋಗುವ ಸೌಕರ್ಯ. ನಿಲ್ದಾಣವು ಅರ್ಧ ಕಿಮಿಗಿಂತಲೂ ಹೆಚ್ಚಿದ್ದು, ಪಾದಚಾರಿಮಾರ್ಗವೂ ಇಲ್ಲದಿದ್ದಾರೆ ನಮ್ಮದೇ  ಸ್ವಂತ ವಾಹನವನ್ನ ಉಪಯೋಗಿಸುವ ಅಭ್ಯಾಸ ಮಾಡಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಹೀಗಿರುವಾಗ ಟೆಂಡರ್ ಶೂರ್ ನಂತಹ ಯೋಜನೆಗಳು ನಗರ ಯೋಜನೆಗಳಲ್ಲಿ ಒಂದು ಹೊಸ ಆಯಾಮ ಕಲ್ಪಿಸಿದೆ. ಇದನ್ನ ತೆಗಳುವುದರ ಬದಲು ಇನ್ನೂ ಹೆಚ್ಚಾಗಿ ಪ್ರೋತ್ಸಾಹಿಸಿದರೆ ಬೆಂಗಳೂರಿನ ವಾಹನ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಕಾಣಬಹುದು

ಜಗತ್ತಿನಾದ್ಯಂತ, ರಸ್ತೆಯ ಅಗಲ ಒಂದು ಕಾರು ಅಥವಾ  ಹಾಗು ಒಂದರ ಮಗ್ಗಿಯ ಪರಿಮಾಣದ ಕಾರಿನಷ್ಟೇ ಇರುತ್ತದೆ. ಉದಾಹರಣೆಗೆ ಕಾರಿನ ಅಗಲದ ಸರಾಸರಿ ೧೦ ಅಡಿ ಇದ್ದಾರೆ, ರಸ್ತೆಯ ಅಗಲ ೨೦,೩೦, ೪೦ ಇತ್ಯಾದಿ ಅಡಿಇರುತ್ತದೆ. ಸ್ವಲ್ಪ ಹೆಚ್ಚು ಅಗಲವಿದ್ದರೂ ಅಲ್ಲಿ ಮತ್ತೊಂದು ಕಾರು ಹೋಗುವಷ್ಟು ಜಾಗವಿರುವುದು ಬಹಳ ಕಡಿಮೆ.  ರಸ್ತೆಯ ವಿಸ್ತಾರವನ್ನ ೧ ಅಡಿ ಹೆಚ್ಚಿಸಿದರೆ ಹೆಚ್ಚು ಪರಿಣಾಮ ಕಂಡುಬರುವುದಿಲ್ಲ (ಲೇನ್ ಶಿಸ್ತಿನ ಉಲ್ಲಂಘನೆ ಹೆಚಾಗುವುದಷ್ಟೇ) ಆದರೆ ೧ ಅಡಿ ಪಾದಚಾರಿ ಮಾರ್ಗವು  ಹೆಚ್ಚಾದರೆ ಜನರಿಗೆ ನಡೆಯಲು ಪ್ರೋತ್ಸಾಹ ನೀಡಿದಂತೆ.  ಟೆಂಡರ್ ಶೂರ್ ರಸ್ತೆಗಳು ಈ ರೀತಿಯ ಜಾಗತಿಕ ಮಾದರಿಯನ್ನ ಅನುಸರಿಸಿ ವಿನ್ಯಾಸವಗೊಂಡಿವೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಹೇಳಿಕೆ ಸೂಕ್ತವಲ್ಲ, ವೈಜ್ಞಾನಿಕವೂ ಅಲ್ಲ.  ಪಾದಚಾರಿ ಮಾರ್ಗಗಳಮೇಲೆ  ವಾಹನಗಳ ಅತಿಕ್ರಮಣ ಪ್ರವೇಶವೇ ಹೆಚ್ಚಿರುವ ಬೆಂಗಳೂರು ಮಹಾನಗರದಲ್ಲಿ  ಇನ್ನೂ ಹೆಚ್ಚಿನ ಆದ್ಯತೆ ವಾಹನ ಚಾಲಕರಿಗಲ್ಲ, ಪಾದಚಾರಿಗಳಿಗೇ ನೀಡಬೇಕು.

(ಕನ್ನಡಕ್ಕೆ ಅನುವಾದ: ವರುಣ್ ರಾಮಚಂದ್ರ)